ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಟ್ಟಿ: ಸೌಕರ್ಯ ಕೊರತೆ, ಜನರ ಪರದಾಟ

ಹಟ್ಟಿ ಗ್ರಾಮ ಪಂಚಾಯಿತಿ ಆಡಳಿತ ಅಸಡ್ಡೆ
Last Updated 5 ಏಪ್ರಿಲ್ 2016, 10:02 IST
ಅಕ್ಷರ ಗಾತ್ರ

ಹಟ್ಟಿ ಚಿನ್ನದ ಗಣಿ:  ಹಟ್ಟಿ ಗ್ರಾಮ ಪಂಚಾಯಿತಿ ಆಡಳಿತದ ನಿರ್ಲಕ್ಷ್ಯದಿಂದಾಗಿ ಗ್ರಾಮದ ಜನರು ಮೂಲ ಸೌಕರ್ಯಗಳ ಸಮಸ್ಯೆ ಎದುರಿಸುತ್ತಿದ್ದಾರೆ. ಹಟ್ಟಿ ಅತಿ ದೊಡ್ಡ ಗ್ರಾಮ ಪಂಚಾಯಿತಿ. ಸುಮಾರು 18 ಸಾವಿರ ಜನ ಸಂಖ್ಯೆ ಹೊಂದಿದೆ. ಪಟ್ಟಣ ಪಂಚಾಯಿತಿ ಆಗುವ ಅರ್ಹತೆಯನ್ನು ಹೊಂದಿದ್ದರೂ ಸಮಸ್ಯೆಗಳ ಆಗರವಾಗಿದೆ.

ಸಮಪರ್ಕ ಮೂಲ  ಸೌಲಭ್ಯ ಇಲ್ಲದೇ  ಜನರು ಪರದಾಡುತ್ತಿದ್ದಾರೆ. ಕುಡಿಯುವ ನೀರಿನ ಪೂರೈಕೆ ಇಲ್ಲದೆ ನಿತ್ಯ ನೀರಿಗಾಗಿ ಅಲೆಯುವ ಸ್ಥಿತಿ ಉಂಟಾಗಿದೆ. ಎರಡು ವರ್ಷಗಳ ಹಿಂದಷ್ಟೇ ಹಟ್ಟಿ ಚಿನ್ನದ ಗಣಿ ಸಹಕಾರದಿಂದ ಜಲ ನಿರ್ಮಲ ಯೋಜನೆ ಅಡಿಯಲ್ಲಿ ಸುಮಾರು 20 ಕೋಟಿ ವೆಚ್ಚದಲ್ಲಿ  ಅಳವಡಿಸಿದ ಕುಡಿಯುವ ನೀರಿನ ಯೋಜನೆ ಸಂಪೂರ್ಣ ವಿಫಲವಾಗಿದೆ. ಕುಡಿಯುವ ನೀರು 8 ದಿನಕ್ಕೆ ಒಂದು ಸಲ ಪೂರೈಕೆಯಾಗುತ್ತಿದೆ.

ಗ್ರಾಮದಲ್ಲಿ ನೀರಿನ ಸಮಸ್ಯೆ ಹಾಗೆಯೇ ಉಳಿದು ಕೊಂಡಿದೆ. ನೀರು ಪೂರೈಸುವ ಕೊಳಾಯಿಗಳಲ್ಲಿ ಚರಂಡಿ ನೀರು ಸೇರಿನೀರು ಕಲುಷಿತ ಗೊಂಡಿದೆ. ನೀರಿನಲ್ಲಿ ದುರ್ವಾಸನೆ ಬರುತ್ತಿದೆ. ಕೊಳವೆ ಬಾವಿಗಳಿಗೆ ಅಳವಡಿಸಿದ್ದ ಪಂಪ್‌ಗಳು ಕೆಟ್ಟು ತಿಂಗಳುಗಳೇ ಕಳೆದರೂ ದುರಸ್ತಿ ಮಾಡಿಲ್ಲ.   8 ದಿನಕ್ಕೆ ಒಂದು ಸಲ ನೀರು ಬಿಟ್ಟರೂ ಕುಡಿಯಲು ಯೋಗ್ಯವಿಲ್ಲ. ಹಟ್ಟಿ ಕ್ಯಾಂಪ್‌ನ ಲಿಂಗಾವಧೂತ ಮತ್ತು ಪೊಲೀಸ್‌ ಠಾಣೆಯ ಹತ್ತಿರ ಇರುವ ಸಾರ್ವಜನಿಕ ನಲ್ಲಿಗಳಿಂದ ಕುಡಿಯುವ ನೀರು ತರುವುದು ಬಿಡುಗಡೆಯಾಗಿಲ್ಲ ಎಂದು ಗ್ರಾಮದ ಜನರು ಹೇಳುತ್ತಾರೆ.

 ಕಳೆದ ಆರು ತಿಂಗಳಗಳಿಂದ ಗ್ರಾಮದಲ್ಲಿರುವ ಬಹುತೇಕ ಚರಂಡಿಗಳು ಸ್ವಚ್ಛಗೊಳಿಸಿಲ್ಲ. ಎಲ್ಲಂದರಲ್ಲಿ ಚರಂಡಿ ನೀರು ರಸ್ತೆ ಮೇಲೆ ಹರಿದು ಗಬ್ಬು ನಾರುತ್ತಿವೆ. ಸ್ವಚ್ಛಗೊಳಿಸುವಂತೆ ಪಂಚಾಯಿತಿ ಆಡಳಿತದ ಗಮನಕ್ಕೆ ತಂದರೂ ಕ್ರಮ ಜರುಗಿಸುತ್ತಿಲ್ಲ.

  ಗ್ರಾಮದ ಮುಖ್ಯ ರಸ್ತೆ ಅಭಿವೃದ್ಧಿ ಪಡಿಸಿ ರಸ್ತೆ ಮದ್ಯದಲ್ಲಿ ಬೀದಿ ದೀಪಗಳು ಅಳವಡಿಸಲಾಗಿದೆ. ಈ ದೀಪಗಳು ಅಳವಡಿಸಿ ಒಂದು ವರ್ಷವಾದರೂ ಇನ್ನೂ ಬೆಳಕು ನೀಡಿಲ್ಲ. ರಾತ್ರಿಯಲ್ಲಿ ಅಪಘಾತಗಳು ಸಂಭವಿಸುತ್ತಿವೆ. ಭಾನುವಾರದಂದು ನಡೆಯುವ ವಾರದ ಸಂತೆಯ ವ್ಯಾಪಾರಿಗಳು ರಸ್ತೆ ಬದಿಯಲ್ಲಿ ತರಕಾರಿ ಹಾಗೂ ಇನ್ನಿತರ ಅಂಗಡಿಗಳು ಇಡುವುದರಿಂದ ವಾಹನ ಮತ್ತು ಜನರ ಸಂಚಾರಕ್ಕೆ ಅಡ್ಡಿ ಉಂಟಾಗುತ್ತಿದೆ. ಗ್ರಾಮದಲ್ಲಿ ಸರಿಯಾದ ರಸ್ತೆಗಳು ಇಲ್ಲ. ಮಳೆ ಬಂದರೆ ತಿರುಗಾಡಲು ತೊಂದರೆಯಾಗುತ್ತದೆ.

ತಗ್ಗು ಗಳಿಂದ ಕೂಡಿದ ರಸ್ತೆಗಳು ಇರುವುದರಿಂದ ಆಟೊರಿಕ್ಷಾಗಳು ಓಣಿಗಳಲ್ಲಿ ಬರುವುದಿಲ್ಲ. ರೋಗಿಗಳಿಗೆ ಆಸ್ಪತ್ರೆಗೆ ಸಾಗಿಸಲು ತೊಂದರೆಯಾಗುತ್ತಿದೆ. ಸ್ಥಳೀಯ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರಿಲ್ಲದೇ ಹೊರ ರೋಗಿಗಳು ಆರೋಗ್ಯ ಸಹಾಯಕರಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ. 

ಗ್ರಾಮ ಪಂಚಾಯಿತಿಯಲ್ಲಿ ಚುನಾಯಿತಿ ಸದಸ್ಯರ ಆಡಳಿತ ಇಲ್ಲ. ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಪಂಚಾಯಿತಿ ಆಡಳಿತಾಧಿಕಾರಿಯಾಗಿದ್ದಾರೆ. ಸಮಸ್ಯೆಗಳ ಕುರಿತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಗಮನಕ್ಕೆ ತಂದರೆ ನನ್ನ ಕೈಯಲ್ಲಿ ಏನು ಇಲ್ಲ. ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳ ಗಮನಕ್ಕೆ ತರುವಂತೆ ಹೇಳುತ್ತಿದ್ದಾರೆ  ಎಂದು ಹನುಮಂತ, ಇಸ್ಮಾಯಿಲ್‌, ಶಂಕರ, ಯೂಸುಫ್‌, ರೇವಣ ಸಿದ್ದಪ್ಪ, ಶರಣಪ್ಪ, ಲಿಂಗರಾಜ ದೂರುತ್ತಾರೆ. ಜಿಲ್ಲಾಡಳಿತ ಗ್ರಾಮದ ಸಮಸ್ಯೆಗಳ ನೀಗಸಲು ಕ್ರಮ ಜರುಗಿಸಬೇಕೆಂದು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT